ಕನಸಿನ ಗಾದೆಗಳು
೧.ಅಂಬಲಿಗೆ ಗತಿಯಿಲ್ಲ ಅಂಬಾರಿ ಕನಸು
೨.ಕನಸಿನ ಸುಖ ನೆನಸಿದರ ಬರಿ ದು:ಖ
೩.ಇರುಳು ಕಮಸಿನಲಿ ಕಂಡ ಭತ್ತಕ್ಕೆ ಹಗಲು ಗೋಣಿ ಹಾಸಿದ ಹಾಗೆ
೪.ಕನಸಿನಲಿ ತಾಳಿ ಕಟ್ಟಿ ಬೆಳಗಾದ್ಮೇಲೆ ಹೆಂಡ್ತಿ ಹುಡುಕಿದನಂತೆ
೫.ಸತ್ತ ಗಂಡ ಸ್ವಪ್ನಕ್ಕೆ ಬಂದ್ರೆ ಹಿಟ್ಟು ಬಟ್ಟೆ ಕೊಟ್ಟಾನಾ
೬.ಕೋಳಿ ಗೂಡೊಳ್ಗೆ ಕೂತ್ಗೊಂಡು ದೇವಲೋಕದ ಕನಸ ಕಾಣ್ತಿತಂತೆ
೭.ಹಗಲುಗನಸಿನ ಸವಿ ಇರುಳುಗನಸಿಗೆ ಬಂದಿತೆ
೮.ಮೂಕನ ಕನಸು(ಸ್ವಪ್ನ) ಹೇಳಲಿಕ್ಕೆ ಬಾರದು 
೯.ಕನಸಿನ ಗಂಡನನ್ನು ಲೆಕ್ಕಕ್ಕೆ ಸೇರಿಸಿಕೊಂಡ ಹಾಗೆ
೧೦.ಕನಸ್ನಲ್ಲಿ ತಿನ್ನೋನಿಗೆ ಮೊಸರನ್ನಕ್ಕೆ ಕೊರತೆಯೇ!

ಕನಸಿನ ಬಗೆಗಿನ ನಂಬಿಕೆಗಳು
೧.ಮೊದಲ ಜಾವದ ಕನಸಿನ ಫಲಾಫಲಗಳು ಒಂದು ಸಂವ್ಸರದೊಳಗೆ ಫಲಿಸುತ್ತವೆ.
೨.ಎರಡನೆ ಜಾವದ ಕನಸಿನ ಫಲಾಫಲಗಳು ಎಂಟು ತಿಂಗಳೊಳಗೆ ಫಲಕಾರಿಯಾಗುತ್ತವೆ.
೩.ಮೂರನೆ ಜಾವದ ಕನಸಿನ ಫಲಾಫಲಗಳು ಮೂರು ತಿಂಗಳೊಳಗೆ ಫಲಿಸುತ್ತವೆ.
೪.ನಸುಕಿನ ಜಾವದ ಕನಸಿನ ಫಲಾಫಲಗಳು ಹತ್ತು ದಿನಗಳಲ್ಲಿ ಫಲಿಸುತ್ತವೆ.
೫.ಆರರ ಹೊತ್ತಿನ ಕನಸಿನ ಫಲಾಫಲಗಳು ಆ ದಿನದಲ್ಲಿಯೇ ಫಲ ನೀಡುತ್ತದೆ.
೬.ದಕ್ಷಿಣದಿಕ್ಕಿಗೆ ಪ್ರಯಾಣ ಮಾಡುವಂತಹ ಕನಸು ಕಂಡರೆ ಆರು ತಿಂಗಳೊಳಗೆ ಸಾವು ಸಂಭವಿಸುತ್ತದೆ.
೭.ತಲೆ ಮೇಲೆ ಕೊಂಬು ಬಂದಂತೆ ಕನಸು ಕಂಡರೆ ಅಧಿಕಾರ ,ಗೌರವ ಲಭಿಸುತ್ತದೆ.
೮.ಬಸುರಿ ಹೆಂಗಸರು ಕನಸಿನಲ್ಲಿ ತುಂಬು ಗರ್ಭಿಣಿಯೊಂದಿಗೆ ಮಾತಾಡಿದರೆ ಅವಳಿ-ಜವಳಿ ಮಕ್ಕಳಾಗುತ್ತವೆ.
೯.ಕನಸಿನಲ್ಲಿ ಮನೆ ಮುಂಭಾಗ ಕಾರು, ಬಸ್ಸು, ಲಾರಿ, ಜೀಪು ಮುಂತಾದ ವಾಹನಗಳು ಬಂದು ನಿಂತರೆ ಆ ಮನೆಯಲ್ಲಿ ಸಾವಾಗುತ್ತದೆ.
೧೦.ಕನಸಿನಲ್ಲಿ ಮಾಂಸದ ಊಟವನ್ನು ಮಾಡಿದರೆ ಹತ್ತಿರ ಸಂಬಂಧಿಕರು ಸಾಯುತ್ತಾರೆ.